ಪಿ.ಯು.ಸಿ ೨ನೇ ವರ್ಷ. ನಾನು, ವಿಜಯ್ ಮಸಾಲೇ ದೋಸೆ ತಿನ್ನಲು ಹೊಟೆಲ್‌ಗೆ ಹೋಗಿದ್ದೆವು. ಅದು-ಇದು ಅಂತ ಮಾತಾಡುತ್ತಿದಂತೆ ಟೇಬಲ್‍ಗೆ ಎರಡು ಮಸಾಲೆ ದೋಸೆ ಬಂದೆ ಬಿಟ್ಟಿತು. ಮಸಾಲೆ ದೋಸೆಯನ್ನು ತಿನ್ನುವ ವಿಶೇಷ ಹಾಗು ಸರಿಯಾದ ಪದ್ಧತಿಯನ್ನು ವಿಜಯ್ ಅಂದು ನನಗೆ ತೋರಿಸಿದ - ದೋಸೆಗೆ ಮಸಾಲೆ( ಆಲುಗಡ್ಡೆ ಪಲ್ಲೆ, ಶೇಂಗಾ ಚಟ್ನಿ) ಹಾಕಿ ಸುತ್ತಿ ಕೊಟ್ಟಿರುತ್ತಾರೆ. ಅದನ್ನು ಉದ್ದವಾಗಿ ಎದ್ದು ನಿಲ್ಲಿಸಿದಾಗ ಮಸಾಲೆ ತಟ್ಟೆಗೆ ಬೀಳುತ್ತದೆ. ಎದ್ದು ನಿಲ್ಲಿಸಿದ, ಆದರೆ ಇನ್ನು ಸುತ್ತಿರುವ, ಮಸಾಲೆ ದೋಸೆಯನ್ನು ಮತ್ತೆ ತಟ್ಟೆಗೆ ಅಡ್ಡವಾಗಿ ಮೊದಲಿನ ಹಾಗೇ ಇಟ್ಟು, ಮೇಲಿನಿಂದ ಒತ್ತಬೇಕು. ಆಗ ಅದು ಪದರು-ಪದರುಗಳಾಗಿ ಮುರಿಯುತ್ತದೆ. ಆ ಪದರುಗಳಲ್ಲಿ, ಮೇಲ್ಪದರಿನಿಂದ ತುಂಡು-ತುಂಡಾಗಿ ಮಾಡುತ್ತಾ, ಮಸಾಲೆಯನ್ನು ಹಚ್ಚಿ ತಿನ್ನಬೇಕು. ಇದನ್ನು ಕೇಳಿ ನಾನು ತುಂಬಾ ಹೊಗಳಿದ್ದೇ.
ವರ್ಷಗಳು ಉರುಳಿದವು. ನಾನು ಇಂಜಿನಯರಿಂಗೆ ಮೈಸೂರ್ ಸೇರಿದೆ. ಇಂಜಿನಯರಿಂಗ್‌ನ ಕೊನೆಯ ವರ್ಷವದು. ಸುಮಾರು ೨೦-೨೧ರ ಹರೆಯ. ಹುಡುಗಿ ಒಮ್ಮೆ ಕಣ್ಣು ಇತ್ತ ತಿರುಗಿಸಿ, ತುಟಿಯಲ್ಲಿ ಸಣ್ಣ, ತುಂಟ ನಗೆ ಕೊಟ್ಟರೆ, ಜಗತ್ತೇ ಮರೆತು ಹೋಗುವ ಹುಚ್ಚು ವಯಸ್ಸು.
ನಾನು ಹಾಗು ಇನ್ನು ಮೂರು ಗೆಳೆಯರು ಸೇರಿ ಬೆಂಗಳೂರಿನ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪೆನಿಯಲ್ಲಿ ಕೊನೆಯ ವರ್ಷದ ಪ್ರಾಜೆಕ್ಟ್ ಕೆಲಸವನ್ನು ಕೈಗೆತ್ತಿಕೊಂಡಿದ್ದೆವು. ವಾರಾಂತ್ಯಕ್ಕೆ ಮೈಸೂರಿನಿಂದ-ಬೆಂಗಳೂರಿಗೆ ಪ್ರಯಾಣ. ಮುಂಜಾನೆ ೬ ಗಂಟೆಗೆ ಹೊರಟು ಬೆಂಗಳೂರಿಗೆ ಸುಮಾರು ೯ ಗಂಟೆಗೆ ಬಂದು ತಲುಪುತ್ತಿದ್ದೆವು. ಇಳಿದ ಕೂಡಲೇ ಹತ್ತಿರದ ಹೋಟೆಲ್‌ನಲ್ಲಿ ತಿಂಡಿ.
ಹೀಗೆಯೇ ಒಂದು ದಿನ. ಹೋಟೆಲ್‌ಗೆ ಹೋದಾಗ ಒಂದು ಟೇಬಲ್‍ನಲ್ಲಿ ನಾವು ನಾಲ್ವರು ಕುಳಿತೆವು. ನಾನು ಯಥಾಪ್ರಕಾರ ಮಸಾಲೆ ದೋಸೆಯನ್ನೇ ಆರ್ಡ್‌ರ್ ಮಾಡಿದೆ. ನನ್ನ ಪಕ್ಕದ ಟೇಬಲ್‍ನ ಮುಂದಿನ ಟೇಬಲ್ ಖಾಲಿಯಿತ್ತು. ನೋಡುತ್ತಿದ್ದಂತೆಯೇ, ಅಲ್ಲಿಗೆ ಯುವಕ-ಯುವತಿಯರಿಬ್ಬರು ಬಂದು ಕುಳಿತರು. ಅವರು, ಕುಳಿತಿದ್ದದ್ದು ಹೇಗಿತೆಂದರೇ, ಆ ಯುವತಿ-ನಾನು ಮುಖಾ-ಮುಖಿಯಾಗಿದ್ದೆವು. ಆಗಲೇ, ಸ್ವಲ್ಪ ನಿದ್ದೆ ಕಣ್ಣಿನಿಂದ ಎಚ್ಚೆತ್ತಿದ್ದು.
ಆಗೊಮ್ಮೆ-ಈಗೊಮ್ಮೆ ನಾನು ಅವಳನ್ನು ನೋಡ್ತಾ ಇದೆ. ಅವಳು ನನ್ನ ಕಡೆ ನೋಡಿದ ಕೂಡಲೇ ಬೇರೆ ಕಡೆಗೆ ನೋಟ. ಹಾಗೆಯೇ ಅವಳು ನನ್ನ ಮೇಲೆ ಕಣ್ಣು ಹಾಯಿಸ್ತಾ ಇದ್ದಳು. ನಾನು ನೋಡಿದ ಕೂಡಲೇ ನೋಟ ಬೇರೆಡೆಗೆ ಪಲಾಯನ. ಹೀಗೆ, ನನ್ನ-ಅವಳ ಕಣ್ಣುಗಳು ಆಗಾಗ ಸಂಪರ-ಕಿಸ್-ಉತ್ತಿದವು. ಇಷ್ಟೆಲ್ಲಾ ಕಣ್ಣಲ್ಲಿ ನಡೆಯುತ್ತಿದ್ದಾಗ, ಪಿ.ಯು.ಸಿ.ಯಲ್ಲಿ ಮಸಾಲೆ ದೋಸೆ ತಿಂದದ್ದು ತಲೆಯಲ್ಲಿ ಓಡ್ತಾ ಇತ್ತು. ಅದೇ ರೀತಿಯಲ್ಲಿ ನಾನು ಈಗ ಇವಳೆದುರು ದೋಸೆ ತಿಂದರೆ, ಫುಲ್ ಇಂಪ್ರೆಸ್ ಜಮಾಯಿಸಬಹುದು ಅನ್ನೊ ಖಾತರಿ ಬರ್ತಾಇತ್ತು.
ಅಷ್ಟರಲ್ಲಿ ನನ್ನ ದೋಸೆ ಟೇಬಲ್‍ಗೆ ಬಂತು. ಅದನ್ನು ನೋಡುತ್ತಿದ್ದಂತೆ, ನನ್ನ ಕತೆಯಲ್ಲಿ ಟ್ವಿಸ್ಟ್ ಕೂಡಾ ಬಂತು! ದುರಾದೃಷವಶಾತ್, ಆ ನನ್ನ ದೋಸೆ ಚಪಟ್ಟೆಯಾಗಿ-ತ್ರಿಕೋಣಾಕೃತಿಯಲ್ಲಿತ್ತು!! ಒಂದು ಕ್ಷಣ ನಿರಾಸೆಯಾದರೂ, ಹುಡುಗಿ ಇಂಪ್ರೆಸ್ ಮಾಡೋ ಆಸೆ ಮಾತ್ರ ಹೋಗಲಿಲ್ಲಾ. ಇವೆಲ್ಲದರ ಮಧ್ಯೆ ನನ್ನ-ಅವಳ ಕಣ್ಣುಗಳು ಒಬ್ಬರನ್ನೊಬ್ಬರು ಕುಶಲ-ಕ್ಷೇಮ ವಿಚಾರಿಸುತ್ತಲೇ ಇದ್ದವು. ಆ ದೋಸೆಯ ಮೇಲ್ಬಾಗದಲ್ಲಿ ಹಾಗೆಯೇ ದುಂಡಾಗಿ ಹರಿದೆ. ಅವಳ ಕಣ್ಣುಗಳಲ್ಲಿ ಕುತೂಹಲ ಮೂಡ ತೊಡಗಿತು. ಆ ದೋಸೆಯ ಮೂರೂ ಕೊನೆಗಳಲ್ಲಿ ಎರಡು ಕೊನೆಗಳನ್ನು ಹಿಡಿದು, ಮೂರನೆಯ ಕೊನೆಯನ್ನು ಚೆಲ್ಲಿ ಹೋಗದಂತೆ ನಿಧಾನವಾಗಿ ಎತ್ತಿ, ದೋಸೆಯನ್ನು ತಿರುಗಿ ಹಾಕಿದರೆ ಮಸಾಲೆಯಲ್ಲಾ ತಟ್ಟೆಗೆ ಬರುತ್ತದೆ. ದೋಸೆಯನ್ನು ಮತ್ತೆ ಮೊದಲಿನ ಹಾಗೆಯೇ ಇಟ್ಟು, ಮೇಲಿನಿಂದ ಒತ್ತಿ, ಪದರುಗಳಾಗಿ ಮಾಡಿ, ಹರಿದು ತಿನೋಣಾ ಅಂದು ಕೊಂಡೆ. ಹಾಗೆಯೇ ಶುರು ಮಾಡಿದೆ. ಎರಡು ಕೊನೆಗಳನ್ನು ಹಿಡಿದು ಮೂರನೆಯ ಕೊನೆಯನ್ನು ಮೇಲೆ ಎತ್ತುತ್ತಿದ್ದೆ. ಅವಳ ಕಣ್ಣುಗಳು ಪಿಟುಕದೆ ನನ್ನ ತಟ್ಟೆಯಲ್ಲೇ ನೆಟ್ಟಿದ್ದವು. ಅದೃಷ್ತಾ ಇಲ್ಲಿಯೂ ಕೈ ಕೊಟ್ಟು! ಆ ಮೂರನೆ ಕೊನೆಯನ್ನು ತಿರುಗಿಸಿ ಹಾಕುವಲ್ಲಿ, ಆ ದೊಸೆಯಲ್ಲಾ ಚೆಲ್ಲಾ-ಪಿಲ್ಲಿಯಾಗಿ ತಟ್ಟೆಗೆ ಬಿತ್ತು! ಅಷ್ಟೆ ಸಾಕು...ನಾನು ಪಟಕ್ಕನೆ ಅವಳೆಡೇ ನೋಡಿದೆ, ಅವಳು ಕಿಸಕ್ಕ್‌ನೆ ನಕ್ಕು ತಲೆ ಬಗ್ಗಿಸಿ ಬಿಟ್ಟಳು. ನನ್ನ ಸ್ಥಿತಿ ಹೇಳು-ಹೆಸರಿಲ್ಲದಂತಾಯಿತು. ಸುಮ್ಮನೆ ತಲೆ ಬಗ್ಗಿಸಿ ದೋಸೆ ತಿಂದೆ. ಮುಗಿಸಿ ಕೈತೊಳೆಯಲೆಂದು ಎದ್ದಾಗಲೇ ನನ್ನ ತಲೆ ಕೂಡಾ ಎದಿತು. ಅವಳು ಅಲ್ಲಿ ಇರಲೇ ಇಲ್ಲಾ! ಟೇಬಲ್ ಮೇಲೆ ಬಿಲ್,ಹಣ ಅಷ್ಟೆ ಇತ್ತು.
ಆ ಆಸೆಯ ದೋಸೆ ನನ್ನ ಮೀಸೆ ಮಣ್ಣು ಮಾಡಿತ್ತು!!
Friday, May 29, 2009
Subscribe to:
Posts (Atom)