Monday, June 22, 2009

ಹುಲಿ ಬಂತು ಹುಲಿ

ಇಂಜಿನಯರಿಂಗ್‍ನ ಕೊನೆಯ ವರ್ಷ. ೭ನೇ ಸೆಮಿಸ್ಟರ್ ಆಗ ತಾನೇ ಶುರುವಾಗಿತ್ತು. ಜಾಸ್ತಿ ಓದು ಇಲ್ಲ. ಅವತ್ತು ರಾತ್ರಿ ೧ ಗಂಟೆಯಾಗಿತ್ತು. ಹಾಸ್ಟೆಲಿನ ಮಧ್ಯೆದಲ್ಲಿ ಸ್ವಲ್ಪ ಜಾಗವಿತ್ತು. ಎಲ್ಲರೂ ಅಲ್ಲೇ ಮಾತಾಡುತ್ತ ಕುಳಿತಿದ್ದೆವು. ಸಿನಿಮಾ-ಹುಡುಗಿ-ಕ್ರಿಕೆಟ್-ಕಾದಂಬರಿ-ಕಾಲೇಜಿನ ಡವ್ ಸ್ಟೋರಿಗಳು...ಹೀಗೆ ವಯಸ್ಸಿಗೆ ಬಂದ ೪-೫ ಜನ ಹುಡುಗರನ್ನು ಬಿಟ್ಟರೆ ಏನು ಮಾತಾಡ್ತಾರೊ ನಾವು ಅದನ್ನೇ ಮಾತಾಡುತ್ತಿದ್ದೆವು. ಕುಳಿತಲ್ಲಿಯೇ ಏನೇನೊ ಚರ್ಚೆಗಳು. ಹಾಗೇಯೇ ವಿಷಯ ಸುಮಾರು ೨-೩ ದಿವಸಗಳ ಹಿಂದೆ ನಮ್ಮ ಜೆ.ಸಿ.ಇ. ಕ್ಯಾಂಪಸ್‍ಗೆ ಹುಲಿಯೊಂದು ನುಗ್ಗಿರುವ ಸುದ್ದಿ ಕಡೆಗೆ ಹರೆಯಿತು.ಕ್ಯಾಂಪಸ್‍ನ ಮೂಲೆಯೊಂದರಲ್ಲಿ ಒಬ್ಬ ಪೇದೆಯನ್ನು, ಹುಲಿಯನ್ನು ಹಿಡಿಯಲು ಪಂಜರವನ್ನು ಇಟ್ಟಿದ್ದಾರೆಂದು ಗೊತ್ತಾಯಿತು. "ರಾತ್ರಿ ೧ ಗಂಟೆಯಾಗಿದೆ. ಇದೇ ಸಮಯದಲ್ಲಿ ಹುಲಿ ಹೊರಗಡೆ ತಿರುಗಾಡುತ್ತಿರುತ್ತದೆ. ಈಗ ಒಂದು ಬೀಟ್( ಸುತ್ತು ) ಹೊಡೆಯಲು ಹೋದರೆ, ಅದು ಕಣ್ಣಿಗೆ ಬೀಳಬಹುದು" ಅಂತ ಯಾರೊ ಹೇಳಿದರು. ಇನ್ನೊಬ್ಬ, "ನಮ್ಮ ಹತ್ರ ಕೂಡ ಬ್ಯಾಟ್, ವಿಕೇಟ್, ಕಬ್ಬಿಣದ ಸರಳು( ಯಾವುದೊ ಮುರಿದ ಕಿಟಕಿಯದದು ), ಕಬ್ಬಿಣದ ಚೈನು ( ಊರಿಗೆ ಹೋಗುವಾಗ ಲಗೇಜ್ ಕಟ್ಟೋಕೆ ಬಳಸೋದು ) ಎಲ್ಲಾ ಇವೆ. ತಗೊಂಡು ಹೋಗೋಣ. ಹಾಗೇನಾದರು ಹುಲಿ ಸಿಕ್ಕ್ರೇ ಜಜ್ಜಿ ಹಾಕಿ ಬಿಡೋಣ. ಇಷ್ಟೊಂದು ಜನ ಬೇರೆ ಇದ್ದೀವಿ" ಅಂದ. ಹೌದು, ಅವನಂದದ್ದು ಸರಿಯಾಗಿತ್ತು. ನಾವು ಇದ್ದದ್ದು ಸುಮಾರು ೨೫-೩೦ ಮಂದಿ. ಸಿಗರೇಟ್ ಹಚ್ಚಿಕೊಂಡು, ತಲೆಗೇ ಕ್ಯಾಪ್, ಕೆಲವರು ಶೂಸ್, ಟಾರ್ಚ್ ತಗೊಂಡು ಮೇಲೆ ಹೇಳಿದ ಅಸ್ತ್ರಗಳನೆಲ್ಲ ಕೈಗೊಂದರಂತೆ ಹಿಡಿದುಕೊಂಡು ಸೈನ್ಯೆ ರೆಡಿಯಾಗಿಯೇ ಬಿಟ್ಟಿತು. ೧೦-೧೫ ನಿಮಿಷದ ಹಿಂದೆ, ಬೀಡಿ-ಸಿಗರೇಟ್ ಎಳೆಯುತ್ತಾ ಕುಳಿತಿದ್ದ ಹುಡುಗರು ಒಮ್ಮೆಲೇ ಈ ರೀತಿ ಶಸ್ತ್ರ-ವಸ್ತ್ರಗಳಿಂದ ಸಿದ್ದವಾದಾಗ ನನಗೆ ಮೊದಲ ಸಲ ಅರಿವಾಗಿದ್ದು - "ಬಿಸಿರಕ್ತ" ಅಂದರೇನು? "ಬಿಸಿರಕ್ತದ ಯುವಕರು" ಅಂತ ಯಾಕೆ ಹೇಳ್ತಾರೆ? ಅಂತ.

ಎಲ್ಲರೂ ಗುಂಪಿನಲ್ಲೆ ಇರಬೇಕು. ಹುಲಿಯ ಇರುವಿಕೆ, ಬರುವಿಕೆ ಗೊತ್ತಾದೊಡನೆಯೇ ಗುಂಪಾಗಿ ಅದರ ಮೇಲೆ ಬೀಳೋಣ, ಘರ್ಷಿಸೋಣ...ಹೀಗೆ ಕೆಲವು ನಿಯಮಗಳನ್ನು, ಯೋಜನೆಗಳನ್ನು ಹಾಕಿಕೊಂಡು ಹೊರಟಿತು ಪಡೆ, ಹುಲಿಯ ಕಡೆ, ಅದನು ಹಿಡಿಯಲು-ಬಡಿಯಲು-ಕಡಿಯಲು.

ನಮ್ಮ ಹಾಸ್ಟೆಲ್ ಇರುವುದು ಕ್ಯಾಂಪಸ್‍ನ ಒಂದು ಕಡೆಗೆ. ಆ ಪಂಜರವಿಟ್ಟಿರುವುದು ಕ್ಯಾಂಪಸ್‍ನ ಇನ್ನೊಂದು ಕಡೆಗೆ. ಅಲ್ಲಿಗೆ ಹೋಗಲು ನೇರವಾದ ರಸ್ತೆ. ನಾವೆಲ್ಲಾ ಅದೇ ರಸ್ತೆಯಲ್ಲಿ ದಾಪುಗಾಲುಗಳನಿಡುತ್ತಾ ಹೊರಟೆವು. ಹಾಸ್ಟೆಲ್‍ನಲ್ಲಿ ಅರ್ಧಕ್ಕೆ ನಿಂತಿದ್ದ ಚರ್ಚೆಗಳು ಮುಂದುವರೆದವು. ಆ ರಸ್ತೆಯ ಮುಕ್ಕಾಲು ಭಾಗದ ಎಡಗಡೆಗೆ ಕಾಲೇಜಿನ ಕ್ಲಾಸ್ ರೂಮ್‍ಗಳು, ಬಲಗಡೆಗೆ ಬಯಲು, ಬಯಲಿನ ಆ ಕಡೆಗೆ ಬೇರೆ ಕ್ಲಾಸ್ ರೂಮ್‍ಗಳು. ಕ್ಲಾಸ್ ರೂಮ್‍ಗಳ ಹೊರಗಡೆಯ ವಿದ್ಯುತ್ ದೀಪಗಳು ಉರಿಯುತ್ತಿದ್ದವು. ಸಾಕಷ್ಟು ಬೆಳಕು ಬೀಳುತ್ತಿದ್ದುದ್ದರಿಂದ ಭಯ ಪಡಬೇಕಾಗುವ ಅವಶ್ಯಕತೆ ಬರಲಿಲ್ಲ.ಇಬ್ಬರೂ ಹುಡುಗರು ಹಾಗೆಯೇ ಮುಂದು ನಡೆದರು ಸಹ. ಸ್ವಲ್ಪ ಹೊತ್ತಿನಲ್ಲೆ ಆ ರಸ್ತೆಯ ಕೊನೆ ಬಂದಿತು. ಎರಡು ಬದಿಗೆ ಮೊಣಕಾಲುದ್ದದ ಒಣ ಹುಲ್ಲು. ಅಲ್ಲಿಂದ ಎಡಗಡೆಗೆ ತಿರುಗಿದರೇ ಮತ್ತೇ ನೇರವಾದ ರಸ್ತೆ. ಅಲ್ಲಿಂದಲೇ ಕತ್ತಲು ಶುರುವಾಗುವುದು ಕೂಡ.

ನಾವೆಲ್ಲ ಎಡಗಡೆಗೆ ತಿರುಗುತ್ತಿದ್ದಂತೆ, ಆ ಒಣಗಿದ ಹುಲ್ಲುಗಳ ಒಂದು ಮೂಲೆಯಿಂದ ಹುಲ್ಲಿನ ಪೊದೆ ಜೋರಾಗಿ ಅಲ್ಲಾಡ ತೊಡಗಿತು. ಒಂದು ಕ್ಷಣ ಎಲ್ಲರ ಮಾತು ನಿಂತು ಬಿಟ್ಟವು. ಎಲ್ಲರದೂ ಆ ಹುಲ್ಲಿನ ಪೊದೆಗಳೆಡೇ ದೃಷ್ಠಿ. ಹುಲಿ ಸಿಕ್ಕಿತು. ನಮಗೆ ಏನೂ ಮಾಡಬೇಕೊ ತೋಚುತ್ತಲೇ ಇಲ್ಲ. ಕೈಯಲ್ಲಿ ಬ್ಯಾಟು, ವಿಕೇಟು, ಬೆಲ್ಟು, ಚೈನು ಆದರೆ ಕಾಲುಗಳು ಮೆಲ್ಲನೆ ಹಿಂಜರಿಯುತ್ತಿದ್ದವು. ಇಡೀ ಗುಂಪಿಗೆ ಗುಂಪೇ ಕಾಲು ಹಿಂದೆ ಹಾಕಹತ್ತಿತು. ಆ ಹುಲ್ಲಿನ ಪೊದೇ ಅಲ್ಲಾಡುತ್ತಾ ನಮ್ಮೆಡೆಗೇ ಬರ ತೊಡಗಿತು. "ಓಡ್ರಲೊ..." ಅಂತ ಯಾವನೋ ಕೂಗಿಬಿಟ್ಟ. ಆರ್ಡರ್‍ಗೆ ಕಾಯುತ್ತಿದ್ದರೊ ಏನೊ? ತಕ್ಷಣ - ಹುಡುಗರೆಲ್ಲಾ ಹಿಂದೆ ತಿರುಗಿದ್ದೆ ತಡ ಓಟ ಶುರು. ಅದೇ ಕ್ಷಣದಲ್ಲಿ, ಆ ಹುಲ್ಲಿನ ಪೊದೆಯಿಂದ ನಮ್ಮ ಗುಂಪಲ್ಲಿ ಮುಂದೆ ಹೋಗಿದ್ದ ಇಬ್ಬರು ಹುಡುಗರು ಎದ್ದು ನಿಂತು - ಹ್ಹ...ಹ್ಹ...ಹ್ಹ...ಅಂತ ಗಹಗಹಿಸಿ ನಕ್ಕು ಬಿಟ್ಟರು. ಓಡಲು ಕಿತ್ತಿದ್ದ ಕಾಲುಗಳು ಹಾಗೇ ನಿಂತು ಬಿಟ್ಟವು.

ಹುಲಿ ಸಿಕ್ಕ ರೋಮಾಂಚನ - ಏನೂ ಮಾಡಬೇಕೆಂದು ಗೊತ್ತಾಗದ ದಿಗ್ಭ್ರಮೆ - ಪ್ರಾಣ ಸಂಕಟದಲ್ಲಿದೆ ಎಂಬ ಅರಿವು - ಕೊನೆಗೇ ಛೇ! ಇವರಾ ಅನ್ನೋ ತಾತ್ಸರದಿಂದ ಕೂಡಿದ ಸಮಾಧಾನ...ಎಲ್ಲವೂ ಒಂದೆರಡೂ ಕ್ಷಣದಲ್ಲೇ ಬಂದು ಹೋಗಿಬಿಟ್ಟವು.

ಹಿಂದಿಟ್ಟ ಹೆಜ್ಜೆ ಮತ್ತೆ ತಿರುಗಿಸಿ ಮುಂದಿಟ್ಟೆವು. ಆ ಎಡ ತಿರುವಿನ ರಸ್ತೆಯಲ್ಲಿ ಕೊನೆತನಕ ಹೋದಾಗ ಕಾಲೇಜು ಸಿಕ್ಕಿತು. ಅಲ್ಲಿ ಪೇದೆ ಕುಳಿತಿದ್ದ. ಅವನು ಅಲ್ಲಿ ವನ್ಯಮೃಗ ರಕ್ಷಕ ತಂಡದವರು ಹಾಕಿಟ್ಟ ಪಂಜರವನ್ನು ತೋರಿಸಿ, ೨-೩ ದಿವಸಗಳ ಹಿಂದೆ ಏನಾಗಿತ್ತು ಅಂತೆಲ್ಲಾ ವರ್ಣಿಸಿದ. ವರ್ಣವೇ ಇಳಿದು ಹೋಗಿದ್ದ ನಾವು ಅದೆಲ್ಲ ಕೇಳಿಸಿಕೊಂಡು ಸುಮಾರು ೩ ಗಂಟೆಗೇ ಹಾಸ್ಟೆಲ್‍ಗೇ ಹಿಂದಿರುಗಿ, ನಮ್ಮ ಶಸ್ತ್ರಾಸ್ತ್ರಗಳನ್ನು ಅವುಗಳ ಸ್ಥಾನದಲ್ಲಿಟ್ಟು ಮಲಗಿದೇವು.

Friday, June 19, 2009

ಕಥೆ ಹೇಳಲು ಹೋಗಿ ಕತ್ತೆಯಾದ ನಾನು

ಧನ್ಯಾ ನನ್ನ ನಾದಿನಿಯ ಮಗಳು. ೩ ರಿಂದ ೪ಕ್ಕೆ ಹೋಗುತ್ತಿರುವ, ಸಿಕ್ಕಾಪಟ್ಟೆ ಕುತೂಹಲದ ಹುಡುಗಿ. ಬೀರೂರಲ್ಲಿ ಅಜ್ಜಿ-ಅಜ್ಜರ ಜೊತೆಗಿದ್ದಾಳೆ. ಅಜ್ಜನ ಮನೆ ಪಕ್ಕದಲ್ಲಿಯೇ, ಮುತ್ತಜ್ಜನ ಮನೆ. ಸಾಕಲ್ಲವೇ, ಬಾಲ್ಯದ ಜೀವನಕ್ಕೆ ಸ್ವರ್ಗವೇ ಇದ್ದ ಹಾಗೇ. ಬೀರೂರು ಸಣ್ಣ ಊರು. ಅಜ್ಜಿ ಮನೆಯಲ್ಲಿ ಬೊರ್ ಇಲ್ಲ. ಗಚ್ಚು ತುಂಬಿಸೊದು ರೂಢಿ.

ನಮ್ಮ ಅತ್ತೆ-ಮಾವನವರು( ಅಂದರೆ ಧನ್ಯಾಳ ಅಜ್ಜ-ಅಜ್ಜಿ) ಬೆಂಗಳೂರಿಗೆ ಸಂಬಂಧಿಕರ ಮದುವೆಗೆ ಬಂದಿದ್ದರು.ಅಜ್ಜ-ಅಜ್ಜಿ ಜೊತೆಗೇ ಧನ್ಯ ಕೂಡ ಬಂದಿದ್ದಳು. ಅವಳು ಬಂದಿದ್ದು ನಮಗೆ ಖುಶಿಯೊ ಖುಶಿ. ಅವಳಿಗೂ ಅಷ್ಟೆ ಸಂಭ್ರಮ. ನಮಗೆ ಯುಗಾದಿ-ಅವಳಿಗೆ ದೀಪಾವಳಿ. ಅವಳು ತಿಂಗಳುಗಳಿದ್ದಾಗಿನಿಂದಲೂ ನಾನು ಅವಳೊಂದಿಗೆ ತುಂಬಾ ಒಡನಾಡಿದ್ದೇನೆ. ಅದಕ್ಕೆ, ಮನೆಗೆ ಬಂದೊಡನೆ - ದೊಡ್ಡಪ್ಪ ಎಲ್ಲಿದಿ? ಏನು ಮಾಡ್ತಿದಿ? ಅದು ಏನು-ಇದು ಏನು? ಹೀಗೆ ಪ್ರಶ್ನೆಗಳ ಸುರಿಮಳೆ. ನಂತರ, ಬಾ ಅಡುಗೆ ಆಟ ಆಡೋಣ, ಸ್ನಾನ ಮಾಡಿಸೋ ಆಟ ಆಡೋಣ; ಆಮೇಲೆ, ಈ ಕಥೆ ಹೇಳು-ಆ ಕಥೆ ಹೇಳು ಅಂತ. ಹೇಳಿದ ಕಥೆಯನ್ನೇ ಹೇಳಿ-ಹೇಳಿ ನನಗೆ ಬೇಸರ; ಅದೇ ಕಥೆ-ಅದೇ ಕ್ಲೈಮಾಕ್ಸ್ ಕೇಳಲು ಅವಳಿಗೆ ಸಡಗರ.

ಹೀಗೆಯೇ
, ಅವಳಿಗೇ ಕಥೆಗಳನ್ನು ಹೇಳುವಾಗ ಘಟನೆಗಳಿವು: ನಾನು ಅವಳಿಗೆ ಮೊದಲ ಸಲ ಕಥೆ ಹೇಳುತ್ತಿದ್ದದ್ದು. ಇದು ಆ ಕಾಗೆ-ಹೂಜಿ ಕಥೆ. ನಿಮಗೆಲ್ಲಾ ಗೊತ್ತಿರಲೇಬಹುದು - ಕಾಗೆಗೇ ಬಾಯಾರಿಕೆಯಾಗಿ ನೀರನ್ನು ಅರಸಿ ಹೊಗುತ್ತದೆ. ಕೊನೆಗೊಂದು ಮನೆಯ ಮೇಲಿನ ಹೂಜಿವೊಂದರಲ್ಲಿ ನೀರನ್ನು ಕಾಣುತ್ತದೆ. ಆ ನೀರು ಕೆಳಮಟ್ಟದಲ್ಲಿರುತ್ತದೆ...ಹೀಗೆ ಆ ಕಥೆ ಮುಂದುವರಿಯುತ್ತದೆ. ಕಥೆ ಶುರು ಮಾಡುವ ಮೊದಲು ನನಗೊಂದು ಯೊಚನೆ ಬಂತು. ಸುಮ್ಮನೆ - "ಒಂದು ಊರಿನಲ್ಲಿ" ಅಂತಾ ಹೇಳುವ ಬದಲು "ಬೀರೂರು" ಅಂತಾ ಹೇಳಿದರೇ, ಇವಳು ಇದು ತನ್ನೂರಿನ ಕಥೆಯೆಂದು ಇನ್ನೂ ಕುತೂಹಲದಿಂದ ಕೇಳುತ್ತಾಳೆ ಎಂದಂದುಕೊಂಡೆ. ನನಗೆ ಹಿಗ್ಗೊ-ಹಿಗ್ಗು. ಏನೊ ಹೊಸತು ಪ್ರಯೊಗ ಮಾಡುತ್ತಿರುವೆನೆಂಬ ಖುಶಿ. ಶುರು ಮಾಡಿದೆ - "ಬೀರೂರಲ್ಲಿ ಒಂದು ಕಾಗೆ ಇತ್ತು. ಅದೊಂದು ದಿನ ತುಂಬಾ ಬಿಸಿಲಿತ್ತಂತೆ.ಆ ಕಾಗೆಗೇ ತುಂಬಾ ನೀರಡಿಕೆಯಾಗಿತ್ತು.ಅದು ಅಲ್ಲಿ-ಇಲ್ಲಿ ಎಲ್ಲ ಕಡೆ ನೀರನ್ನು ಹುಡುಕುತ್ತ ಇತ್ತು. ಅದಕ್ಕೆ ನೀರೆ ಸಿಗಲಿಲ್ಲ". ಅಲ್ಲಿಗೆ, ಧನ್ಯ - "ಹಾಗಿದ್ದರೆ, ಆದು ಅಜ್ಜನ ಮನೆಗೆ ಹೊಗಬಹುದಿತ್ತಲ್ಲ ದೊಡ್ಡಪ್ಪ. ಅಲ್ಲಿ ನೀರು ಸಿಗುತ್ತಿತ್ತು" ಎಂದಳು. ನಾನು ಒಂದು ಕ್ಷಣ ಅವಕ್ಕಾದೆ. ಕಥೆಯನ್ನು ಹಾಗೇ ಹೇಳೋಣ-ಹೀಗೇ ಹೇಳೋಣ ಅಂತ ನಾನೇ ಕಥೆಯಲ್ಲಿ ಎಷ್ಟು ಮಗ್ನನಾಗಿದ್ದೇನೆಂದರೆ, ಮುಂದೆ ಏನು ಹೇಳಬೇಕೊ ಗೊತ್ತೆ ಆಗಲಿಲ್ಲ. ಅವಳ ದೊಡ್ಡಮ್ಮ, ಅಂದರೆ ನನ್ನಾಕೆ, ಅಲ್ಲೇ ಕುಳಿತ್ತಿದ್ದಳು. ತಕ್ಷಣ - "ಇಲ್ಲ ಧನ್ಯ, ಅವತ್ತು ನೀರು ಬಂದಿರಲಿಲ್ಲ. ಅದಕ್ಕೆ ಮನೆಯಲ್ಲಿ ನೀರೇ ಇರಲಿಲ್ಲ". ಅಂದಳು. ಧನ್ಯಳ ಪ್ರತ್ಯುತ್ತರ ರೆಡಿಯಾಗಿಯೇ ಇತ್ತು - "ಹಾಗಿದ್ದರೆ, ಪಕ್ಕದ ಅಜ್ಜನ ಮನೆಯಲ್ಲಿ ಕೇಳಬಹುದಿತ್ತಲ್ಲ" ಅಂದಳು. ಅಲ್ಲಿಗೆ, ನನ್ನ ಹೆಂಡತಿ ಬಾಯಿಗೂ ಬೀಗ ಬಿತ್ತು. ಹಾಗೆಯೇ, ಕಥೆ ಕೂಡ ಮುಗಿದಿತ್ತು. ಏಕೆಂದರೆ, ಮುಂದೆ ಹೇಳಲು ಅವಳು ನನಗೆ ಬಿಡಲೇ ಇಲ್ಲ.ಅವಳಿಗೆ, ಆ ಕಥೆಯ ಕ್ಲೈಮ್ಯಾಕ್ಸಗಿಂತ ಸದ್ಯಕ್ಕೆ ಆ ಕಾಗೆ ಅಜ್ಜನ ಮನೆಗೇ ಯಾಕೆ ಹೋಗಲಿಲ್ಲ? ಅನ್ನೋದೆ ತಲೆಯಲ್ಲಿ ತುಂಬಿ ಹೋಯಿತು. ಕಾಗೆ, ಬೀರೂರು, ನನ್ನ ಹೊಸ ಪ್ರಯೊಗ ಎಲ್ಲ ಎಕ್ಕುಟ್ಟುಕೊಂಡು ಹೋಯಿತು!

ಇನ್ನೂ
ಎರಡನೇ ಘಟನೆ, ಕೆಲದಿನಗಳ ನಂತರ.ನಾನು ನಾಲಿಗೆ ಸುಟ್ಟುಕೊಂಡ ಬೆಕ್ಕಿನಂತೆ ಆಗಿದ್ದೆ. ಮತ್ತೊಮ್ಮೆ ಕಥೆ ಹೇಳುವ ಪ್ರಸಂಗ ಒದಗಿ ಬಂತು. ಈ ಸಲ ನನಗೆ ಗೊತ್ತಿತ್ತು - ಇವಳಿಗೆ ಕಥೆ ಹೇಳಿದರೆ ಅವಕ್ಕಾಗುವ ಸ್ಥಿತಿ ಬರೋದು ಗ್ಯಾರಂಟಿ ಅಂತ. ಅದಕ್ಕಾಗಿ ಯಾವುದೇ ಪ್ರಯೋಗಕ್ಕೆ ಕೈ ಹಾಕಲಿಲ್ಲ. ಈ ಸಲದ ಕತೆ ಒಗ್ಗಟ್ಟಿನದು. ನಾವು ಸಣ್ಣವರಿದ್ದಾಗ ಡಿಡಿ-೧ ರಲ್ಲಿ ಬರುತ್ತಿತ್ತು. ಬೇಡ-ಗುಬ್ಬಿಗಳ ಕಥೆ - "ಆ ಗುಬ್ಬಿಗಳ್ಳೆಲ್ಲ ಒಮ್ಮೆ ಮರದ ಕೆಳಗೆ ಬಿದ್ದ ಅಕ್ಕಿ ಕಾಳುಗಳನ್ನು ಹೆಕ್ಕುತಿರುತ್ತವೆ. ಅವಕ್ಕೆ ಬೇಡ ಬಲೆ ಬೀಸುತ್ತಾನೆ. ಅವೆಲ್ಲವೂ ಸೇರಿ ಆ ಬಲೆಯನ್ನು ಎತ್ತಿಕೊಂಡು ಬೇರೆ ಊರಿಗೆ ಹಾರಿ ಹೋಗುತ್ತವೆ. ಅಲ್ಲಿ ಇಲಿಗಳೊಂದಿಗೆ ಸ್ನೇಹ ಮಾಡಿ..." ಹೀಗೆ ಕಥೆ ಮುಂದುವರಿಯುತ್ತದೆ. ನಾನು ಶುರು ಹಚ್ಚಿಕೊಂಡೆ - "ಒಂದೂರಿನಲ್ಲಿ ಬಹಳಷ್ಟು ಗುಬ್ಬಿಗಳದ್ದವಂತೆ. ಅವಕ್ಕೆಲ್ಲಾ ಹೊಟ್ಟೆ ಹಸಿದಿತ್ತು. ಅಲ್ಲಿ ಒಂದು ಮರದ ಕೆಳಗೆ ಅಕ್ಕಿ ಕಾಳುಗಳು ಬಿದ್ದಿದ್ದವಂತೆ. ಅವೆಲ್ಲವು ನೆಲದ ಮೇಲಿದ್ದ ಅಕ್ಕಿಯ ಕಾಳುಗಳನ್ನು ತಿನ್ನಲು ಶುರುಮಾಡಿದವಂತೆ...". ಅಷ್ಟೇ!, ಅಲ್ಲಿಗೆ ಅವಳದೊಂದು ಬ್ರೇಕ್ ಬಿತ್ತು - "ದೊಡ್ಡಪ್ಪ, ಆ ಗುಬ್ಬಿಗಳು ನೆಲದ ಮೇಲೆ ಬಿದ್ದದ್ದನ್ನು ಯಾಕೆ ತಿನ್ನುತ್ತಿದ್ದವು? ಅದು ಹೊಲಸಾಗಿರುತ್ತಲ್ಲಾ. ತಟ್ಟೆಯಲ್ಲಿರೊದನ್ನ ತಿನ್ನಬೇಕು" ಅಂದಳು. ಈ ಸಲವೂ ನಾನು ಒಂದು ಕ್ಷಣ ಅವಕ್ಕಾದೆನಾದರು, ಪ್ರಿಪೇರ್ ಆಗಿದ್ದನಲ್ಲಾ ಅದಕ್ಕೆ " ಜೋರ್ ಕಾ ಜಟಕಾ ಧೀರೆ ಸೇ ಲಗಾ". ಇಲ್ಲಮ್ಮಾ ಅವಕ್ಕೆ ಗೊತ್ತಗೊಲ್ಲ. ಅವು ಹಾಗೇಯೆ ತಿನ್ನೊದು ಅಂತಾ ಹೇಳಿ ಕಥೆ ಮುಂದುವರಿಸಿಬಿಟ್ಟೆ. ಅಷ್ಟೆ ಅಲ್ಲಾ ಈ ಸಲ ಕಥೆ ಮುಗಿಸಿದೆ ಕೂಡ!

ಹೀಗೆ - ನನ್ನ ಮಗಳಿಗೆ ಕಥೆ ಹೇಳಲು ಹೋಗಿ ನನ್ನದೇ ಒಂದು ಕಥೆ ಆಗೋಯ್ತು.

Monday, June 15, 2009

ಗುಳಿಗೆಯ ಗಳಿಗೆ

ನನ್ನಾಕೆಗೇ ಗುಳಿಗೆ ನುಂಗುವುದೆಂದರೇ ಪ್ರಾಣ ಸಂಕಟ, ಧರ್ಮ ಸಂಕಟ. ಪ್ರಾಣ ಸಂಕಟ ಯಾಕೇಂದರೇ, ಆ ಗುಳಿಗೆಗೇ ಅವಳ ಗಂಟಲಿನ ನಾಳ ಸಣ್ಣದು ಎಂಬುದು ಅವಳ ಅಭಿಪ್ರಾಯ. ಜೊತೆಗೇ, ಆ ಗುಳಿಗೆಯ ವಾಸನೇ ಅವಳಿಗೆ ದೂರದಿಂದಲೇ ಆಗದು. ಅದು ಅವಳಿಗೇ ದೂರ್-ವಾಸನೇ. ಇನ್ನೂ ಧರ್ಮ ಸಂಕಟ ಯಾಕೇಂದರೇ, ಅದನ್ನು ನುಂಗದಿದ್ದರೇ ಆರೋಗ್ಯ ಭಾಗ್ಯ ಇಲ್ಲ!!

ನನ್ನದೊ ಅಥವಾ ನಮ್ಮ ಮಾವನವರ ಒತ್ತಾಯಕ್ಕೆ ಮಣಿದು ಏಕಾದಶಿಗೊ, ಸಂಕಷ್ಟಿಗೊ ಗುಳಿಗೆಯನ್ನು ಗುಳುಂ ಮಾಡುತ್ತಾಳೆ. ಒಂದಾನೊಂದು ಕಾಲದಲ್ಲಿ ನಮ್ಮ ದೇಶದಲ್ಲಿ ಅಸ್ಪಶ್ಯತೆ ರಾ...ರಾ...ಅಂತಾ ರಾರಾಜಿಸುತ್ತಿತ್ತಂತೆ. ಈ ಅಸ್ಪಶ್ಯತೆ ಅಂದರೇನು? ಆ ರೀತಿಯಾಗಿ ಜನ ಹೇಗೆ ವರ್ತಿಸಲೂ ಸಾಧ್ಯ? ಎಂಬ ಹಲವಾರು ಪ್ರಶ್ನೆಗಳು ನನ್ನ ತಲೆಯಲ್ಲಿ ದಶಮಾನಗಳಿಂದ ಟೆಂಟ್ ಹಾಕಿಕೊಂಡು ವಾಸಿಸುತ್ತಿದ್ದವು. ಅವುಗಳಿಗೆಲ್ಲಾ ನನ್ನ ಹೆಂಡತಿ ಉತ್ತರಿಸಿದಳು. ಎಲ್ಲರೂ ಗುಳಿಗೆಯನ್ನು ವಿಘ್ನ ಪರಿಹಾರಕನ ರೀತಿಯಲ್ಲಿ ನೋಡಿದರೇ, ನನ್ನ ಹೆಂಡತಿ ಅದನ್ನು ನೀಚಕುಲದವನಂತೇ ನೋಡುತ್ತಾಳೆ. ನೊಡುವದಷ್ಟೇ ಅಲ್ಲಾ, ಅದನ್ನು ಹಿಡಿಯುವುದು ಹಾಗೇನೇ - ಎಲ್ಲಿ ತನ್ನ ಮಡಿ ಮುರಿದು ಹೋಗುವುದೊ ಎನ್ನುವಂತೆ. ಜಿರಲೇಯನ್ನು ಹೇಗೆ ಅದರ ಕಾಲ ತುದಿಯನ್ನೊ ಅಥವಾ ಮೀಸೆ ತುದಿಯನ್ನೊ ಹಿಡಿದು ಹೊರದೂಡುತ್ತೆವೊ ಹಾಗೇ ಇವಳು ಗುಳಿಗೆಯನ್ನು ತುದಿಯಲ್ಲಿ ಹಿಡಿದು ತನ್ನ ಮುಂದಿನ ಕಾರ್ಯವನ್ನು ಮುಂದುವರಿಸುತ್ತಾಳೆ.

ನನ್ನ ಪಿ.ಯು.ಸಿ ಆದ ಮೇಲೆ ಎರಡನೇ ಯೋಚನೇ ಮಾಡದೇ ಇಂಜಿನಯರಿಂಗ್ ಸೇರಿದೆ. ನಾನು ಡಾಕ್ಟರ್‍ಗಿರಿಗೇ ಹೋಗಬೇಕಂತಾ ನನ್ನಗೆಂದೂ ಅನಿಸಲಿಲ್ಲ. ಬಹುಶಃ ಆ ದೇವರು ಮುಂಬರುವ ನನ್ನ ಬಾಳಸಂಗಾತಿಯನ್ನು ಫಿಕ್ಸ್ ಮಾಡಿ ಇಟ್ಟಿದ್ದಾ ಅನಿಸುತ್ತೆ. ಅದಕ್ಕೇ ಆ ಯೋಚನೆಯನ್ನಾ ನನ್ನ ತಲೆಯಲ್ಲಿ ತರಲೆಯಿಲ್ಲಾ.