ಬಸವನಗುಡಿಯ ರಾಮಕೃಷ್ಣ ಆಶ್ರಮದ ಸರ್ಕಲ್‍ನಿಂದ ಗಾಂಧಿಬಜಾರ್ ಕಡೆಗೆ ಹೋಗುವಾಗ, ಎಡಗಡೆಗೆ ನೊಕಿಯಾದ ಸಾಫ್ಟ್ ವೇರ್ ಆಫೀಸ್ ಎದ್ದು ಕಾಣುತ್ತಿತ್ತು. ಜಗತ್ತಿನ ಬಹುಭಾಗದ ಜನಸ್ತೋಮದ ಜೀವನಕ್ಕೆ ಮೊಬೈಲ್‍ನ್ನು ಅವಿಭಾಜ್ಯ ಹಾಗೂ ಅನಿವಾರ್ಯ ಅವಶ್ಯಕತೆಯನ್ನಾಗಿ ಮಾಡಿಸಿದ ದೈತ್ಯ. ಫಿನ್‍ಲ್ಯಾಂಡ್ ಎನ್ನುವ ಸಣ್ಣ ದೇಶದ ಕಂಪೆನಿ. "ಇಂತಹದೊಂದು ಕಂಪೆನಿಯಲ್ಲಿ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕರೇ...?" ಆಗಿನ ದಿನಗಳಲ್ಲಿ ಇದೊಂದು ಆಸೆ, ದೇವರಲ್ಲಿ ಇಟ್ಟ ಕೋರಿಕೆ.
ನನಸಾಗುವ ಯಾವ ಭರವಸೆಯಿರಲಿಲ್ಲ. ಆದರೆ ೦೧-ಜೂನ್-೨೦೦೬ ರಂದು ನನ್ನ ಭರವಸೆ ಹುಸಿಯಾಯಿತು, ಕೋರಿಕೆ ನಿಜವಾಯಿತು.
೫ ವರ್ಷಗಳೇ ಕಳೇದಿವೆ. ನನ್ನ ಔದ್ಯೋಗಿಕ ಹಾಗೂ ವ್ಯಯಕ್ತಿಕ ಜೀವನದಲ್ಲಿ ಎಷ್ಟೊಂದು ಉತ್ತಮ ಬದಲಾವಣೆಗಳಾಗಿವೆ. ನನ್ನ ಮುಂದಿನ ನೆಲೆಯನ್ನು ಅರಸುತ್ತಾ, ಈ ಕನಸಿನ ಕಂಪನಿಯನ್ನು ೨೨-ಜುಲೈ-೨೦೧೧ ರಂದು ಬಿಟ್ಟು ಹೋರಟಿರುವೆ.
ಮನುಷ್ಯ ಮೂಲತಃ ಸಾಂಘಿಕ ಜೀವಿ. ಆದರೂ, ಮೊದಲು ಹುಡುಕುವುದು ತನ್ನ ನೆಲೆಯನ್ನು. ಹೀಗೆ, ಆ ನೆಲೆಯನ್ನು ಅರಸುತ್ತಾ ಹೊರಟು, ಇದೇ ನೊಕಿಯಾಗೆ ಬಂದ ಹಲವಾರು ವ್ಯಕ್ತಿಗಳಲ್ಲಿ,ನೀವುಗಳು ನನ್ನ ಜೀವನದ ಹಾಸು ಹೊಕ್ಕಾದಿರಿ. ಹೀಗೋಂದು ದಿನ..., ಹಾಗೊಂದು ಸಂಜೆ... ಅಂತಾ ಯಾವುದು ಇಲ್ಲ. ಈ ಸಂಬಂಧಗಳು ಬೆಸೆದು ಕೊಳ್ಳುವುದೇ ಹೀಗೆ. "ಇಲ್ಲಿಗೆ ನನ್ನ ಪಯಣ ಮುಗಿಯಿತು" ಎಂದು ಗೊತ್ತಾದ ದಿನವೇ ಅರಿವಿಗೆ ಬರುವುದು - ಈ ಸಂಬಂಧಗಳು ನಮ್ಮ ಜೀವನದಲ್ಲಿ ಎಷ್ಟರ ಮಟ್ಟಿಗೆ ಹಾಸುಹೊಕ್ಕಾಗಿವೆ ಎಂದು.
ಕೈಯಲ್ಲಿ ಹಿಡಿದ ಮಂಜುಗಡ್ಡೆ, ಕಣ್ಣೆದುರಿಗೆ ಕರಗುವಂತೆ - ಈ ದೈನಂದಿಕ ಭೇಟಿ, ಹರಟೆ, ಜೊತೆಯಲ್ಲಿ ಟೀ, ಕಾಫಿ, ತಿಂಡಿ, ಮಧ್ಯಾಹ್ನದ ಊಟ, ಇನ್ನು ೧-೨ ದಿನಗಳು ಮಾತ್ರ. ಇಂದು ಮಾಹಿತಿ ತಂತ್ರಜ್ಞಾನ ತುಂಬಾ ಮುಂದುವರೆದಿದೆ. ಫೇಸ್‍ಬುಕ್, ಟ್ವಿಟರ್ ನಂತಹ ಸೊಶಿಯಲ್ ನೆಟ್ವರ್ಕಿಂಗ್ ವೆಬ್ ಸೈಟ್‍ಗಳು ಇರುವುದರಿಂದ, ಒಬ್ಬರನ್ನೊಬ್ಬರು ಸದಾ ಭೇಟಿಯಲ್ಲಿಟ್ಟು ಕೊಳ್ಳಬಹುದು. ನಿಜ. ಆದರೆ, ತಂತ್ರಜ್ಞಾನ ಒಂದು ಅನುಕೂಲತೆಯೇ ಹೊರತು ಪ್ರಸ್ತುತ ವಸ್ತು-ಸ್ಥಿತಿಯ, ನೈಜತೆಯ ಬದಲು( Replacement ) ಅಲ್ಲ. ನಾವು ಮತ್ತೇ-ಮತ್ತೇ ಭೇಟಿಯಾಗಬಹುದು, ಆಗಾಗ ಸಿಗಬಹುದು. ಹೌದು, ಅದು ನಿಜವೇ. ನಾನು ಹೇಳುತಿರುವುದು - ಹೇಳು-ಕೇಳುಗೆಗೆ, ಆ ಟೀಕೆ-ಟಿಪ್ಪಣಿಗಳ ಹರಟೆಗೆ, ಆ ಸಣ್ಣ-ಪುಟ್ಟ ಗೆಲುವು-ನಲಿವುಗಳ ಹಂಚಿಕೆಯ ಸಹಭಾಗಿತ್ವಕ್ಕೆ, ನಿಮ್ಮಗಳ ಜೊತೆಗಿನ ಒಡನಾಟ, ದಿನ ಬೆಳಗಾದರೇ ಮತ್ತೇ ಸಿಗೋಲ್ಲಾ ಎನ್ನುವ ಅಗಲಿಕೆಯ ನೋವಿನ ಬಗ್ಗೆ.
ಮುಂದಿನ ಪಯಣದಲ್ಲಿ ಮತ್ತೆ ಹೊಸ ಸಂಬಂಧಗಳು ಚಿಗುರುವವು. ಅಲ್ಲಿಯೂ ಸಹ ಇವೆಲ್ಲಾ ಇರುತ್ತವೆ ಅನ್ನುವ ಭರವಸೆ ನನಗಿದೆ. ಸಾಂಘಿಕ ಜೀವಿಯಾದ ಮನುಷ್ಯ, ಎಲ್ಲಿ ಹೋದರು - ಸಂಘ ರೂಪಿಸಿಯೇ ಕೊಳ್ಳುತ್ತಾನೆ. "ಸಂಘದೋಷ!" ವಿದ್ದೇ ಇರುತ್ತದೆ. ಆದರೆ "ಇಲ್ಲಿನ ಈ ಋಣ" ಮುಗಿಯಿತು. ನನ್ನ ನೋವು-ನಲಿವುಗಳಿಗೆ ಸ್ಪಂದಿಸಿದ ನಿಮ್ಮ ಇರುವಿಕೆ ನನ್ನ ಆವರಣದೊಳಗಿರುವುದಿಲ್ಲ. ಇಂತಹ ಅಗಲಿಕೆ, ಕಳಚಿದ ಸಂಬಂಧದ ಕೊಂಡಿ, ಒಂದು ಹೇಳಿಕೊಳ್ಳಲಾರದ ನೋವೇ.
ಈಗಿರುವ ಈ ನೆಲೆಯಲ್ಲಿ ಸಹ-ಪಯಣಿಕರಾಗಿ ಸಿಕ್ಕ ನೀವು, ನನ್ನ ಜೀವನದ ಪಯಣಕ್ಕೆ ರೂಪು-ರಂಗು-ರೇಶೆಗಳನ್ನು ತುಂಬಿದಿರಿ. ಪಯಣದ ನೆನಪನ್ನು ಮಧುರವಾಗಿಸಿದಿರಿ. ಮುಂಬರುವ ಪಯಣಕ್ಕೆ ಸಹಸ್ರ-ಸಹಸ್ರ ನೆನೆಪಿಕ ಕಾಣಿಕೆಗಳನ್ನು ನನ್ನ ಜೋಗುಳಿಯಲ್ಲಿ ತುಂಬಿ ಕಳಿಸುತ್ತಿರುವ ನಿಮಗೆ ನಾನು ಚಿರಋಣಿ, ಕೃತಙ್ಞ.
ಮುಂದಿನ ಕರ್ಮಋಣ ಕೈಬೀಸಿ ಕರೆದಾಗ, ಆ ಕರ್ತವ್ಯವನ್ನು ಅರಸಿ ಹೊರಟವನೇ ನಾನು. ಆದರೆ, ಆ ಆಯ್ಕೆಯಲ್ಲಿ ಅನಿವಾರ್ಯತೆ ಅಡಗಿದೆ. ಸಿಕ್ಕ ಉತ್ತಮ ಅವಕಾಶಗಳ ಒಪ್ಪಿಕೊಂಡ ಆನಂದದ ಆ ಭಾವದಲ್ಲಿ, ಅಗಲಿಕೆಯ ನೋವು ಹೆಜ್ಜೆ ಹಾಕಿದೆ.
ಆನಂದದ ಭಾಷ್ಪದೀ
ಅಗಲಿಕೆಯ ಈ ನೋವು
ತಾ ಮಿಂದು-ಜೊತೆ ನಿಂತಿರಲು,
ನೆಲೆಯ ಅರಸುತ ಹೊರಟ
ಈ ಪಯಣಿಗನ ಕತೆಯಲಿ,
ಸಮಯದೀ ಸಮಾಧಿಯ
ಸೇರಿದ ಋಣಕೇ,
ನೆನಪುಗಳೇ ಆವರಣ,
ಆ ಚಿರನಿದ್ರೆಯ
ಅಲಂಕರಣ!
ಧನ್ಯವಾದಗಳೊಂದಿಗೆ...
Thursday, July 21, 2011
Subscribe to:
Posts (Atom)