ಇಂಜಿನಯರಿಂಗ್ನ ಕೊನೆಯ ವರ್ಷ. ೭ನೇ ಸೆಮಿಸ್ಟರ್ ಆಗ ತಾನೇ ಶುರುವಾಗಿತ್ತು. ಜಾಸ್ತಿ ಓದು ಇಲ್ಲ. ಅವತ್ತು ರಾತ್ರಿ ೧ ಗಂಟೆಯಾಗಿತ್ತು. ಹಾಸ್ಟೆಲಿನ ಮಧ್ಯೆದಲ್ಲಿ ಸ್ವಲ್ಪ ಜಾಗವಿತ್ತು. ಎಲ್ಲರೂ ಅಲ್ಲೇ ಮಾತಾಡುತ್ತ ಕುಳಿತಿದ್ದೆವು. ಸಿನಿಮಾ-ಹುಡುಗಿ-ಕ್ರಿಕೆಟ್-ಕಾದಂಬರಿ-ಕಾಲೇಜಿನ ಡವ್ ಸ್ಟೋರಿಗಳು...ಹೀಗೆ ವಯಸ್ಸಿಗೆ ಬಂದ ೪-೫ ಜನ ಹುಡುಗರನ್ನು ಬಿಟ್ಟರೆ ಏನು ಮಾತಾಡ್ತಾರೊ ನಾವು ಅದನ್ನೇ ಮಾತಾಡುತ್ತಿದ್ದೆವು. ಕುಳಿತಲ್ಲಿಯೇ ಏನೇನೊ ಚರ್ಚೆಗಳು. ಹಾಗೇಯೇ ವಿಷಯ ಸುಮಾರು ೨-೩ ದಿವಸಗಳ ಹಿಂದೆ ನಮ್ಮ ಜೆ.ಸಿ.ಇ. ಕ್ಯಾಂಪಸ್ಗೆ ಹುಲಿಯೊಂದು ನುಗ್ಗಿರುವ ಸುದ್ದಿ ಕಡೆಗೆ ಹರೆಯಿತು.ಕ್ಯಾಂಪಸ್ನ ಮೂಲೆಯೊಂದರಲ್ಲಿ ಒಬ್ಬ ಪೇದೆಯನ್ನು, ಹುಲಿಯನ್ನು ಹಿಡಿಯಲು ಪಂಜರವನ್ನು ಇಟ್ಟಿದ್ದಾರೆಂದು ಗೊತ್ತಾಯಿತು. "ರಾತ್ರಿ ೧ ಗಂಟೆಯಾಗಿದೆ. ಇದೇ ಸಮಯದಲ್ಲಿ ಹುಲಿ ಹೊರಗಡೆ ತಿರುಗಾಡುತ್ತಿರುತ್ತದೆ. ಈಗ ಒಂದು ಬೀಟ್( ಸುತ್ತು ) ಹೊಡೆಯಲು ಹೋದರೆ, ಅದು ಕಣ್ಣಿಗೆ ಬೀಳಬಹುದು" ಅಂತ ಯಾರೊ ಹೇಳಿದರು. ಇನ್ನೊಬ್ಬ, "ನಮ್ಮ ಹತ್ರ ಕೂಡ ಬ್ಯಾಟ್, ವಿಕೇಟ್, ಕಬ್ಬಿಣದ ಸರಳು( ಯಾವುದೊ ಮುರಿದ ಕಿಟಕಿಯದದು ), ಕಬ್ಬಿಣದ ಚೈನು ( ಊರಿಗೆ ಹೋಗುವಾಗ ಲಗೇಜ್ ಕಟ್ಟೋಕೆ ಬಳಸೋದು ) ಎಲ್ಲಾ ಇವೆ. ತಗೊಂಡು ಹೋಗೋಣ. ಹಾಗೇನಾದರು ಹುಲಿ ಸಿಕ್ಕ್ರೇ ಜಜ್ಜಿ ಹಾಕಿ ಬಿಡೋಣ. ಇಷ್ಟೊಂದು ಜನ ಬೇರೆ ಇದ್ದೀವಿ" ಅಂದ. ಹೌದು, ಅವನಂದದ್ದು ಸರಿಯಾಗಿತ್ತು. ನಾವು ಇದ್ದದ್ದು ಸುಮಾರು ೨೫-೩೦ ಮಂದಿ. ಸಿಗರೇಟ್ ಹಚ್ಚಿಕೊಂಡು, ತಲೆಗೇ ಕ್ಯಾಪ್, ಕೆಲವರು ಶೂಸ್, ಟಾರ್ಚ್ ತಗೊಂಡು ಮೇಲೆ ಹೇಳಿದ ಅಸ್ತ್ರಗಳನೆಲ್ಲ ಕೈಗೊಂದರಂತೆ ಹಿಡಿದುಕೊಂಡು ಸೈನ್ಯೆ ರೆಡಿಯಾಗಿಯೇ ಬಿಟ್ಟಿತು. ೧೦-೧೫ ನಿಮಿಷದ ಹಿಂದೆ, ಬೀಡಿ-ಸಿಗರೇಟ್ ಎಳೆಯುತ್ತಾ ಕುಳಿತಿದ್ದ ಹುಡುಗರು ಒಮ್ಮೆಲೇ ಈ ರೀತಿ ಶಸ್ತ್ರ-ವಸ್ತ್ರಗಳಿಂದ ಸಿದ್ದವಾದಾಗ ನನಗೆ ಮೊದಲ ಸಲ ಅರಿವಾಗಿದ್ದು - "ಬಿಸಿರಕ್ತ" ಅಂದರೇನು? "ಬಿಸಿರಕ್ತದ ಯುವಕರು" ಅಂತ ಯಾಕೆ ಹೇಳ್ತಾರೆ? ಅಂತ.
ಎಲ್ಲರೂ ಗುಂಪಿನಲ್ಲೆ ಇರಬೇಕು. ಹುಲಿಯ ಇರುವಿಕೆ, ಬರುವಿಕೆ ಗೊತ್ತಾದೊಡನೆಯೇ ಗುಂಪಾಗಿ ಅದರ ಮೇಲೆ ಬೀಳೋಣ, ಘರ್ಷಿಸೋಣ...ಹೀಗೆ ಕೆಲವು ನಿಯಮಗಳನ್ನು, ಯೋಜನೆಗಳನ್ನು ಹಾಕಿಕೊಂಡು ಹೊರಟಿತು ಪಡೆ, ಹುಲಿಯ ಕಡೆ, ಅದನು ಹಿಡಿಯಲು-ಬಡಿಯಲು-ಕಡಿಯಲು.
ನಮ್ಮ ಹಾಸ್ಟೆಲ್ ಇರುವುದು ಕ್ಯಾಂಪಸ್ನ ಒಂದು ಕಡೆಗೆ. ಆ ಪಂಜರವಿಟ್ಟಿರುವುದು ಕ್ಯಾಂಪಸ್ನ ಇನ್ನೊಂದು ಕಡೆಗೆ. ಅಲ್ಲಿಗೆ ಹೋಗಲು ನೇರವಾದ ರಸ್ತೆ. ನಾವೆಲ್ಲಾ ಅದೇ ರಸ್ತೆಯಲ್ಲಿ ದಾಪುಗಾಲುಗಳನಿಡುತ್ತಾ ಹೊರಟೆವು. ಹಾಸ್ಟೆಲ್ನಲ್ಲಿ ಅರ್ಧಕ್ಕೆ ನಿಂತಿದ್ದ ಚರ್ಚೆಗಳು ಮುಂದುವರೆದವು. ಆ ರಸ್ತೆಯ ಮುಕ್ಕಾಲು ಭಾಗದ ಎಡಗಡೆಗೆ ಕಾಲೇಜಿನ ಕ್ಲಾಸ್ ರೂಮ್ಗಳು, ಬಲಗಡೆಗೆ ಬಯಲು, ಬಯಲಿನ ಆ ಕಡೆಗೆ ಬೇರೆ ಕ್ಲಾಸ್ ರೂಮ್ಗಳು. ಕ್ಲಾಸ್ ರೂಮ್ಗಳ ಹೊರಗಡೆಯ ವಿದ್ಯುತ್ ದೀಪಗಳು ಉರಿಯುತ್ತಿದ್ದವು. ಸಾಕಷ್ಟು ಬೆಳಕು ಬೀಳುತ್ತಿದ್ದುದ್ದರಿಂದ ಭಯ ಪಡಬೇಕಾಗುವ ಅವಶ್ಯಕತೆ ಬರಲಿಲ್ಲ.ಇಬ್ಬರೂ ಹುಡುಗರು ಹಾಗೆಯೇ ಮುಂದು ನಡೆದರು ಸಹ. ಸ್ವಲ್ಪ ಹೊತ್ತಿನಲ್ಲೆ ಆ ರಸ್ತೆಯ ಕೊನೆ ಬಂದಿತು. ಎರಡು ಬದಿಗೆ ಮೊಣಕಾಲುದ್ದದ ಒಣ ಹುಲ್ಲು. ಅಲ್ಲಿಂದ ಎಡಗಡೆಗೆ ತಿರುಗಿದರೇ ಮತ್ತೇ ನೇರವಾದ ರಸ್ತೆ. ಅಲ್ಲಿಂದಲೇ ಕತ್ತಲು ಶುರುವಾಗುವುದು ಕೂಡ.
ನಾವೆಲ್ಲ ಎಡಗಡೆಗೆ ತಿರುಗುತ್ತಿದ್ದಂತೆ, ಆ ಒಣಗಿದ ಹುಲ್ಲುಗಳ ಒಂದು ಮೂಲೆಯಿಂದ ಹುಲ್ಲಿನ ಪೊದೆ ಜೋರಾಗಿ ಅಲ್ಲಾಡ ತೊಡಗಿತು. ಒಂದು ಕ್ಷಣ ಎಲ್ಲರ ಮಾತು ನಿಂತು ಬಿಟ್ಟವು. ಎಲ್ಲರದೂ ಆ ಹುಲ್ಲಿನ ಪೊದೆಗಳೆಡೇ ದೃಷ್ಠಿ. ಹುಲಿ ಸಿಕ್ಕಿತು. ನಮಗೆ ಏನೂ ಮಾಡಬೇಕೊ ತೋಚುತ್ತಲೇ ಇಲ್ಲ. ಕೈಯಲ್ಲಿ ಬ್ಯಾಟು, ವಿಕೇಟು, ಬೆಲ್ಟು, ಚೈನು ಆದರೆ ಕಾಲುಗಳು ಮೆಲ್ಲನೆ ಹಿಂಜರಿಯುತ್ತಿದ್ದವು. ಇಡೀ ಗುಂಪಿಗೆ ಗುಂಪೇ ಕಾಲು ಹಿಂದೆ ಹಾಕಹತ್ತಿತು. ಆ ಹುಲ್ಲಿನ ಪೊದೇ ಅಲ್ಲಾಡುತ್ತಾ ನಮ್ಮೆಡೆಗೇ ಬರ ತೊಡಗಿತು. "ಓಡ್ರಲೊ..." ಅಂತ ಯಾವನೋ ಕೂಗಿಬಿಟ್ಟ. ಆರ್ಡರ್ಗೆ ಕಾಯುತ್ತಿದ್ದರೊ ಏನೊ? ತಕ್ಷಣ - ಹುಡುಗರೆಲ್ಲಾ ಹಿಂದೆ ತಿರುಗಿದ್ದೆ ತಡ ಓಟ ಶುರು. ಅದೇ ಕ್ಷಣದಲ್ಲಿ, ಆ ಹುಲ್ಲಿನ ಪೊದೆಯಿಂದ ನಮ್ಮ ಗುಂಪಲ್ಲಿ ಮುಂದೆ ಹೋಗಿದ್ದ ಇಬ್ಬರು ಹುಡುಗರು ಎದ್ದು ನಿಂತು - ಹ್ಹ...ಹ್ಹ...ಹ್ಹ...ಅಂತ ಗಹಗಹಿಸಿ ನಕ್ಕು ಬಿಟ್ಟರು. ಓಡಲು ಕಿತ್ತಿದ್ದ ಕಾಲುಗಳು ಹಾಗೇ ನಿಂತು ಬಿಟ್ಟವು.
ಹುಲಿ ಸಿಕ್ಕ ರೋಮಾಂಚನ - ಏನೂ ಮಾಡಬೇಕೆಂದು ಗೊತ್ತಾಗದ ದಿಗ್ಭ್ರಮೆ - ಪ್ರಾಣ ಸಂಕಟದಲ್ಲಿದೆ ಎಂಬ ಅರಿವು - ಕೊನೆಗೇ ಛೇ! ಇವರಾ ಅನ್ನೋ ತಾತ್ಸರದಿಂದ ಕೂಡಿದ ಸಮಾಧಾನ...ಎಲ್ಲವೂ ಒಂದೆರಡೂ ಕ್ಷಣದಲ್ಲೇ ಬಂದು ಹೋಗಿಬಿಟ್ಟವು.
ಹಿಂದಿಟ್ಟ ಹೆಜ್ಜೆ ಮತ್ತೆ ತಿರುಗಿಸಿ ಮುಂದಿಟ್ಟೆವು. ಆ ಎಡ ತಿರುವಿನ ರಸ್ತೆಯಲ್ಲಿ ಕೊನೆತನಕ ಹೋದಾಗ ಕಾಲೇಜು ಸಿಕ್ಕಿತು. ಅಲ್ಲಿ ಪೇದೆ ಕುಳಿತಿದ್ದ. ಅವನು ಅಲ್ಲಿ ವನ್ಯಮೃಗ ರಕ್ಷಕ ತಂಡದವರು ಹಾಕಿಟ್ಟ ಪಂಜರವನ್ನು ತೋರಿಸಿ, ೨-೩ ದಿವಸಗಳ ಹಿಂದೆ ಏನಾಗಿತ್ತು ಅಂತೆಲ್ಲಾ ವರ್ಣಿಸಿದ. ವರ್ಣವೇ ಇಳಿದು ಹೋಗಿದ್ದ ನಾವು ಅದೆಲ್ಲ ಕೇಳಿಸಿಕೊಂಡು ಸುಮಾರು ೩ ಗಂಟೆಗೇ ಹಾಸ್ಟೆಲ್ಗೇ ಹಿಂದಿರುಗಿ, ನಮ್ಮ ಶಸ್ತ್ರಾಸ್ತ್ರಗಳನ್ನು ಅವುಗಳ ಸ್ಥಾನದಲ್ಲಿಟ್ಟು ಮಲಗಿದೇವು.
Monday, June 22, 2009
Subscribe to:
Post Comments (Atom)
2 comments:
Bisiraktha thannagaaythu anda haage..
LOL! :D Paapa!
"Eno maaDalu hogiiiii... Enu maaDide neenuuuuu..." :)
Post a Comment